ಪುತ್ರಂಜೀವಿ 
ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ದ್ವಿದಳ ಸಸ್ಯ.  ಪುತ್ರಂಜೀವ ರಾಕ್ಸ್‍ಬರ್ಗಿ ಎಂಬುದು ಇದರ ವೈಜ್ಞಾನಿಕ ಹೆಸರು.  ಇದೊಂದು ಅಲಂಕಾರ ಸಸ್ಯ.  ಇದಕ್ಕೆ ಅಮಾನಿ, ಮೆಣಸಿನಕಾಳೆ ಎಂಬ ಇತರ ಹೆಸರುಗಳಿವೆ.  ಇದು ಇಂಡೋ-ಮಲೇಷಿಯಾ ಪ್ರದೇಶಗಳಲ್ಲಿ ವಿಪುಲವಾಗಿ ಬೆಳೆಯುತ್ತದೆ.  ಭಾರತದಲ್ಲೇ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.  ಇದು ನಿತ್ಯ ಹರಿದ್ವರ್ಣದ ಭಿನ್ನಲಿಂಗಿಮರ, 8-18 ಮೀ.ಎತ್ತರಕ್ಕೆ ಬೆಳೆಯುತ್ತದೆ.  ಭಾರತದ ಎಲ್ಲೆಡೆ ಇದನ್ನು ಅಲಂಕಾರಕ್ಕಾಗಿ ಬೆಳೆಸುವುದುಂಟು.  

ಇದರ ತೊಗಟೆ ಬೂದು ಬಿಳಿ ಮಿಶ್ರಬಣ್ಣದ್ದು.  ಎಲೆಗಳು 5-10 ಸೆಂ.ಮೀ. ಉದ್ದದವು ದೀರ್ಘವೃತ್ತಾಕಾರದವೂ ಆಗಿವೆ.  ಕೆಲವೊಮ್ಮೆ ಅಂಡವೃತ್ತಾಕಾರ ಹಾಗೂ ಬಲ್ಲೆಯಾಕಾರದವೂ ಆಗಿರುವುದುಂಟು.  ಬಣ್ಣ ಹೊಳೆಯುವ ಕಡು ಹಸುರು ಹೂಗಳು ತುಂಬಾ ಚಿಕ್ಕವು; ಇವುಗಳ ಬಣ್ಣ ಹಳದಿ.  ಗಂಡು ಹೂಗಳು ಒತ್ತೊತ್ತಾದ ಗೊಂಚಲುಗಳಲ್ಲಿ ಅರಳುವುವು.  ಹೆಣ್ಣು ಹೂಗಳು ಒಂಟಿಯಾಗಿರಬಹುದು ಇಲ್ಲವೇ 2-3 ಹೂಗಳ ಗುಂಪುಗಳಲ್ಲಿರಬಹುದು.  ಫಲ ಹಸುರು ಬಣ್ಣದ ಡ್ರೂಪ್ 15-18 ಮಿ. ಮೀ. ಉದ್ದ ಇದೆ.  ತುದಿ ಚೂಪಾಗಿದೆ.  

ಪುತ್ರಂಜೀವಿ ಮರಗಳು ಸಾಮಾನ್ಯವಾಗಿ ನದಿಗಳ ಉದ್ದಕ್ಕೂ ಇರುವ ಮೆಕ್ಕಲುಮಣ್ಣಿನಲ್ಲೋ ಜೌಗು ಮಣ್ಣಿನಲ್ಲೇ ನಿತ್ಯ ಹರಿದ್ವರ್ಣದ ಕಾಡುಗಳಲ್ಲೋ ಬೆಳೆಯುತ್ತದೆ.   ಶುಷ್ಕ ಪ್ರದೇಶಗಳಲ್ಲಿ ಇವುಗಳ ಬೆಳವಣಿಗೆ ಕುಂಠಿತವಾಗಿರುತ್ತದೆ.  ಮಳೆಗಾಲದಲ್ಲಿ ಬೀಜಗಳ ಮೂಲಕ ವರ್ಧಿಸುವುವು.  ಜಿಂಕೆ ಮತ್ತು ಬಾವಲಿಗಳ ಮೂಲಕ ಇವುಗಳ ಬೀಜ ಪ್ರಸಾರ ಕ್ರಿಯೆ ನಡೆಯುತ್ತದೆ ಎನ್ನಲಾಗಿದೆ.  ನರ್ಸರಿಯಲ್ಲಿ ಬೆಳೆಸಿದ ಒಂದೆರಡು ವರ್ಷಗಳ ಸಸಿಗಳಿಂದ ಅವುಗಳನ್ನು ಬೆಳೆಸುತ್ತಾರೆ.  ಮಳೆಗಾಲದಲ್ಲಿ ಇದರ ನಾಟಿ ಕೆಲಸವನ್ನು ಚೆನ್ನಾಗಿ ನಡೆಸಬಹುದು.  ಕಠಿಣ ಹಿಮ ಮತ್ತು ನೀರಿನ ಅಭಾವಗಳಿಗೆ ಇದು ಸೂಕ್ಷ್ಮ ಸಂವೇದಿಯಾಗಿದೆ.  
ಇದರ ಕಟ್ಟಿಗೆ ಬೂದು ಬಣ್ಣದ್ದಾಗಿರುತ್ತದೆ.  ಅಲ್ಲದೆ, ಇದು ಗಟ್ಟಿಯಾಗಿಯೂ, ತೂಕವಾಗಿಯೂ ಇರುವುದು.  ಇದು ಬಹುಕಾಲದವರೆಗೆ ಬಾಳಿಕೆ ಬರುತ್ತದೆ.  ಇದರ ಭಾರ 586-785  ಕೆ.ಜಿ. ಕ್ಯೂಬಿಕ್ ಮೀ. ಆದ್ದರಿಂದ ಇದನ್ನು ಮನೆ ಕಟ್ಟುವುದಕ್ಕೆ ವ್ಯವಸಾಯದ ಉಪಕರಣಗಳಿಗೆ ಆಯುಧಗಳ ಹಿಡಿಕೆಗಳಿಗೆ ಮತ್ತು ಕಡೆತದ ಸಾಮಾನುಗಳಿಗೆ ಉಪಯೋಗಿಸುತ್ತಾರೆ.  ಇದರ ಎಲೆ ಮತ್ತು ಬೀಜಗಳಿಂದ ನೆಗಡಿ ಮತ್ತು ಜ್ವರದ ಬಾಧೆಯ ಉಪಶಮನಕ್ಕಾಗಿ ಕಷಾಯ ತಯಾರಿಸುವುದುಂಟು.  ಸಂಧಿವಾತ ಚಿಕಿತ್ಸೆಗೂ ಉಪಯೋಗಿಸುವುದಿದೆ.  ಹಸುಗಳ ಗಂಟಲು ಊದಿಕೊಂಡಾಗ ಇದರ ಎಲೆಗಳ ಲೇಪನವನ್ನು ಹಚ್ಚುವ ಕ್ರಮ ಬಿಹಾರದಲ್ಲು ರೂಢಿಯಲ್ಲಿದೆ.  ಇದರ ಎಲೆಗಳನ್ನು ಮೇವಿಗಾಗಿ ಉಪಯೋಗಿಸುತ್ತಾರೆ.  ಇದರ ಬೀಜಗಳಿಂದ ಸರಗಳನ್ನು ಜಪಮಾಲೆಗಳನ್ನು ತಯಾರಿಸುವುದಿದೆ.									(ಎಂ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ